ಮೌಕ್ತಿಕ ಕವಿ
ಸು. 1120. ಚಂದ್ರನಾಥಾಷ್ಟಕ ಎಂಬ ಗ್ರಂಥದ ಕರ್ತೃ. ಈ ಗ್ರಂಥವನ್ನು ಈತನೇ ಬರೆದನೆಂಬುದಕ್ಕೆ ಗ್ರಂಥಾಂತ್ಯದಲ್ಲಿರುವ ಕೃತಕೃತ್ಯಂ ಮೌಕ್ತಿಕ ಸತ್ಕವಿವಿರಚಿಸಿದೀಸಾರಮಪ್ಪಷ್ಟಕ ಶ್ರೀಸ್ತುತಿಯಂ ಎಂಬ ಮಾತುಗಳು ಆಧಾರವಾಗಿವೆ. ಇದೇ ಪದ್ಯದಲ್ಲಿ ಪೆಣ್ಣೆಂಗಡಲ ಪುರವರಾಧೀಶ್ವರಂ ಚಂದ್ರನಾಥಾ ಎಂದು ಹೇಳಿರುವುದರಿಂದ ಈತ ಪೆಣ್ಣೆಂಗಡಲು ಎಂಬ ಊರಿನವ ಎಂದು ಊಹಿಸಬಹುದಾಗಿದೆ. ಈ ಪೆಣ್ಣೆಂಗಡಲು ಅಥವಾ ಹೆಣ್ಣೆಗಡಲು (ಕೊಡಗು ಜಿಲ್ಲೆ) ಜೈನ ಕೊಂಗಾಳ್ವದ ರಾಜ್ಯಕ್ಕೆ ಸೇರಿತ್ತು. ಇದನ್ನು ವೀರಕೊಂಗಾಳ್ವದೇವ ಸು. 1120ರಲ್ಲಿ ಮೇಘಚಂದ್ರನ ಶಿಷ್ಯ ಪ್ರಭಾಚಂದ್ರರ ಸಿದ್ಧಾಂತದೇವನಿಗೆ ದಾನವಾಗಿ ಕೊಟ್ಟಂತೆ ಶಾಸನವೊಂದರಿಂದ ತಿಳಿದುಬರುತ್ತದೆ. 

ಚಂದ್ರನಾಥಾಷ್ಟಕ ಚಂದ್ರನಾಥ ಸ್ತುತಿಪರವಾದ ಗ್ರಂಥ. ಕನ್ನಡದಲ್ಲಿ ಸ್ವತಂತ್ರವಾಗಿ ದೊರೆತಿರುವ ಅಷ್ಟಕಗಳಲ್ಲಿ ಮೊದಲನೆಯದು. ಇದರಲ್ಲಿ ಒಂಬತ್ತು ವೃತ್ತಗಳಿವೆ. ಪ್ರತಿವೃತ್ತವೂ ಚಂದ್ರನಾಥ ಎಂದು ಮುಗಿಯುತ್ತದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ